ಪೆಂಟಸ್ಟೋಮಿಡ-
ಸಂಧಿಪದಿ ವಂಶಕ್ಕೆ ಸೇರಿದ ಒಂದು ಉಪವರ್ಗ. ಲೆಂಗ್ವಾಟ್ಯುಲಿಡ ಪರ್ಯಾಯ ನಾಮ.  ಇದಕ್ಕೆ ಸೇರಿದ ಜೀವಿಗಳು ನಾಯಿ, ನರಿ, ಮೊಸಳೆ, ಹಾವು ಮುಂತಾದ ಮಾಂಸಾಹಾರಿ ಕಶೇರುಕಗಳ ಫುಪ್ಪುಸ, ನಾಸಿಕ ದ್ವಾರಗಳಲ್ಲಿ ಪರೋಪಜೀವಿಗಳಾಗಿ ಬದುಕುವುವು.  ಮಾನವನಲ್ಲಿ ಪರೋಪಜೀವಿಗಳಾಗಿರುವುದು ಬಹಳ ವಿರಳ. 

ಪೆಂಟಸ್ಟೋಮಿಡಗಳು ನೋಡಲು ಹುಳುಗಳಂತೆ ಕಾಣುವುವು. ಇವುಗಳ ದೇಹ ಕೊಳವೆಯಂತಿದ್ದು ತುಂಬ ಮೃದುವಾಗಿದೆ.  ದೇಹದ ಮೇಲೆ ವರ್ತುಲಾಕಾರದ ತೋಡುಗಳಿವೆಯಾದರೂ ನಿಜವಾದ ಖಂಡವಿಭಜನೆಯಿಲ್ಲ.  ಒಂದು ಜೊತೆ ಕೊಕ್ಕೆಗಳ ಸಹಾಯದಿಂದ ಇತರ ವಸ್ತುಗಳಿಗೆ, ಆಸರೆಗೆ ಕಚ್ಚಿಕೊಳ್ಳುತ್ತವೆ. ಜೀರ್ಣನಾಳ ಉದ್ದವಾದ ಮತ್ತು ನೇರವಾದ ಕೊಳವೆಯಂತಿದೆ.  ರಕ್ತಪರಿಚಲನಾಂಗಗಳಾಗಲೀ ಉಸಿರಾಟದ ಅಂಗಗಳಾಗಲೀ ವಿಸರ್ಜನಾಂಗಗಳಾಗಲೀ ಇಲ್ಲ.  ನರಮಂಡಲ ಬಹಳ ಸರಳ ತೆರನಾದುದು.  ಅನ್ನನಾಳದ ಅಧೋಭಾಗದಲ್ಲಿ ನರಕಣಗಳ ಮುಡಿ ಉಂಟು.  ಇದರಿಂದ ಸಣ್ಣ ನರತಂತುಗಳು ಹೊರಟು ಜೀವಿಯ ದೇಹದ ಎಲ್ಲ ಭಾಗಗಳಿಗೂ ಹರಡಿವೆ.  ಜ್ಞಾನೇಂದ್ರಿಯಗಳು ಇಲ್ಲ.

ಈ ಗುಂಪಿನ ಕೆಲವು ಪ್ರಾಣಿಗಳ ಜೀವನಚಕ್ರ ಒಂದೇ ಪೋಷಕಜೀವಿಯಲ್ಲಿ ಮುಗಿಯುವುದಾದರೆ ಇನ್ನು ಕೆಲವು ಜೀವಿಗಳ ಜೀವನಚಕ್ರದ ಒಂದು ಹಂತ ಮಾಂಸಾಹಾರಿ ಆತಿಥೇಯಗಳಲ್ಲೂ ಇನ್ನೊಂದು ಹಂತ ಮೊಲ, ಮೇಕೆ, ಕುದುರೆ ಮುಂತಾದ ಸಸ್ಯಾಹಾರಿ ಆತಿಥೇಯಗಳಲ್ಲೂ ನಡೆಯುವುದು. 

	ಈ ಪ್ರಾಣಿಗಳ ನಿಷೇಚಿತ ಅಂಡಗಳು ಆತಿಥೇಯ ಪ್ರಾಣಿಯ ದೇಹದಿಂದ ಹೊರಬಂದು ಹುಲ್ಲು ಅಥವಾ ಇತರ ಸಸ್ಯಮೇವಿನಲ್ಲಿ ಮಿಶ್ರಿತವಾಗಿರುವುದು.  ಸಸ್ಯಾಹಾರಿ ಪೋಷಕ ಇದನ್ನು ತಿಂದರೆ ಅದರ ದೇಹದೊಳಗೆ ಸೇರಿಕೊಂಡು ಡಿಂಬಗಳಾಗಿ ಬೆಳೆದು ಪಿತ್ತಜನಕಾಂಗ ಅಥವಾ ಇತರ ಅವಯವಗಳನ್ನು ಭೇದಿಸಿ ಒಳಹೊಕ್ಕು ತಮ್ಮ ಸುತ್ತ ಕೋಶವೊಂದನ್ನು ಸ್ರವಿಸಿ ಹುದುಗಿರುವುವು.  ಈ ಸಸ್ಯಾಹಾರಿಯನ್ನು ಯಾವುದಾದರೂ ಮಾಂಸಹಾರಿ ಪ್ರಾಣಿ ತಿಂದಾಗ ಅವುಗಳ ದೇಹವನ್ನು ಹೊಕ್ಕ ಈ ಕೋಶಜೀವಿಗಳು ಕೋಶದಿಂದ ಬಿಡುಗಡೆಯಾಗಿ ರೂಪಪರಿವರ್ತನೆಗೊಂಡು ಬೆಳೆದು ಪ್ರೌಢಜೀವಿಗಳಾಗುವುವು. ಪೆಂಟಸ್ಟೋಮಿಡದಲ್ಲಿ ಸೆಫಲೋಬೇನಿಡ ಮತ್ತು ಪೋರೊಸಿಫ್ಯಾಲಿಡ ಎಂಬ ಎರಡು ಗಣಗಳಿವೆ. 

	ದಕ್ಷಿಣ ಅಮೆರಿಕದ ಹಾವುಗಳ ಪರಾವಲಂಬಿಯಾಗಿರುವ ಸೆಫಲೊಬೀನ ಹಾಗೂ ಟರ್ನ್ ಮತ್ತು ಗಲ್ ಹಕ್ಕಿಗಳಲ್ಲಿ ಜೀವಿಸುವ ರೈಗ್‍ಹಾರ್ಡಿಯ ಮೊದಲ ಗಣದ ಉದಾಹರಣೆಗಳು. ಎರಡನೆಯ ಗಣಕ್ಕೆ ಲಿಂಗ್ವಾಟ್ಯುಲ, ಸೈಲೀಕಿಯ, ಪೋರೊಸಿಫ್ಯಾಲಸ್ ಹಾಗೂ ರೇಲೀಟೆಲ ಸೇರಿವೆ.  ಇವುಗಳಲ್ಲಿ ಮೊದಲನೆಯದು ಪ್ರೌಢಾವಸ್ಥೆಯಲ್ಲಿ ಮಾಂಸಹಾರಿಗಳಲ್ಲೂ ಡಿಂಬಾವಸ್ಥೆಯಲ್ಲಿ ಮೊಲ, ಕುಂದಿಲಿ ಮುಂತಾದ ಸಸ್ಯಾಹಾರಿಗಳಲ್ಲೂ ಜೀವಿಸುತ್ತದೆ.  ಉಳಿದವು ಹಲ್ಲಿ, ಹಾವು, ಆಮೆ, ಮೊಸಳೆ, ಕಪ್ಪೆ ಮುಂತಾದವುಗಳಲ್ಲಿ ವಾಸಿಸುವುವು. 
											(ಪಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ